ಧ್ಯಾನ		
ಯೋಗಶಾಸ್ತ್ರದ ರೀತ್ಯಪ್ರಚಲಿತವಿರುವ (1) ಯಮ,  (2)  ನಿಯಮ,  (3)   ಆಸನ,  (4)  ಪ್ರಾಣಾಯಾಮ  (5)  ಪ್ರತ್ಯಾಹಾರ,  (6)  ಧಾರಣೆ,  (7)  ಧ್ಯಾನ ಮತ್ತು (8)  ಸಮಾಧಿ  ಎಂಬ ಅಷ್ಟ ಯೋಗಾಂಗಗಳಲ್ಲಿ ಧ್ಯಾನ ಏಳನೆಯದು.  ಯೋಗಾಂಗಗಳ ಅನುಷ್ಠಾನದಿಂದ ಅಶುದ್ಧಿ ಕ್ಷಯವಾಗಿ ಅತ್ಯಂತ ಪ್ರಕೃತಿಯ ಗುಣಗಳಿಗಿಂತ ಬೇರೆಯವನು ಎಂಬ ಸಾಕ್ಷಾತ್ಕಾರ ಆಗುವವರೆಗೂ e್ಞÁನದ ದೀಪ್ತಿ  ಬೆಳೆಯುತ್ತ ಹೋಗುತ್ತದೆ.

ಅಹಿಂಸೆ, ಸತ್ಯ, ಕಳ್ಳತನ ಮಾಡದಿರುವಿಕೆ, ಬ್ರಹ್ಮಚರ್ಯ, ಅಪರಿಗ್ರಹ ಇವುಗಳಿಗೆ ಯಮವೆಂದು ಹೆಸರು.  ಶೌಚ, ಸಂತೋಷ, ತಪಸ್ಸು , ಸ್ವಾಧ್ಯಾಯ ಈಶ್ವರ ಪ್ರಣಿದಾನ - ಇವುಗಳಿಗೆ ನಿಯಯಮವೆಂದು ಹೆಸರು.  ಯಾವುದರಿಂದ ಸ್ಥಿರತೆಯೂ ಸುಖವೂ ಆಗುತ್ತದೆಯೊ ಅದು ಆಸನವೆನಿಸಿದೆ.  ಶ್ವಾಸಗಳ ಗತಿಯನ್ನು ನಿಲ್ಲಿಸುವುದು ಪ್ರಾಣಾಯಾಮವೆನಿಸುತ್ತದೆ.  ಇಂದ್ರಿಯಗಳು ತಮ್ಮ ತಮ್ಮ ವಿಷಯಗಳಲ್ಲಿ ಪ್ರವರ್ತಿಸದಿದ್ದಾಗ ಅವು ಚಿತ್ತದ ಆಕಾರವನ್ನು ತಾಳುತ್ತದೆ; ಇದಕ್ಕೆ ಪ್ರತ್ಯಾಹಾರವೆಂದು ಹೆಸರು.  ನಾಭಿಚಕ್ರ, ಹೃದಯಪುಂಡರೀಕ ಮೊದಲಾದ ದೇಶಗಳಲ್ಲಿ ಚಿತ್ತವನ್ನು ನಿಲ್ಲಿಸಿದಾಗ ಧಾರಣೆಯಾಗುತ್ತದೆ.  ಅನಂತರ ಧ್ಯಾನ.  ಧ್ಯಾನವೇ ಧ್ಯೇಯವಾಗಿ ತನ್ನ ಸ್ವರೂಪವನ್ನು ಬಿಟ್ಟಂತೆ ತೋರಿದಾಗ ಸಮಾಧಿಯೆನಿಸುವುದು.

ಒಂದು ವಸ್ತುವಿನ ಅಥವಾ ವಿಷಯದ ಮೇಲೆ ಮನಸ್ಸು ಎಡಬಿಡದೆ ಪ್ರವಹಿಸಿದರೆ ಧ್ಯಾನ ಎನಿಸುತ್ತದೆ.  ತತ್ರ ಪ್ರತ್ಯಯೈಕತಾನತಾ ಧ್ಯಾನಮ್.  ಒಂದು ವಸ್ತುವನ್ನು ಧ್ಯಾನಿಸುತ್ತಿರುವಾಗ ಆ ವಸ್ತುವಿನ ಹೊರತು ಮಧ್ಯದಲ್ಲಿ ಇನ್ನು  ಬೇರೆ ಯಾವ ಆಲೋಚನೆಯೂ ಬರಕೂಡದು.  ಭಗವಂತನ ಮೇಲೆ ಒಂದೇ ರೀತಿಯ ಭಾವನೆಗಳು - ಬೇರೆ ಬಯಕೆಯೂ ಇಲ್ಲದೆ - ಪ್ರವಹಿಸಿದರೆ ಅದು ಧ್ಯಾನವೆನಿಸುತ್ತದೆ; ಇದು ಹಿಂದಿನ ಆರು ಅಂಗಗಳಿಂದ ಉಂಟಾಗುತ್ತದೆ ಎಂದು ವಿಷ್ಣುಪುರಾಣ  ಹೇಳುತ್ತದೆ.  ಒಂದು ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ಎಣ್ಣೆಯನ್ನೂ ಸುರಿದಾಗ ಅದು ಕವಲೊಡೆಯದೆ ಏಕರೂಪದಿಂದ ಹೇಗೆ ಹರಿಯುತ್ತದೆಯೋ ಹಾಗೆಯೇ ಮನಸ್ಸು ಧ್ಯೇಯವಸ್ತುವಿನ ಮೇಲೆ ನಿರಂತರವಾಗಿ ಹರಿದು ಅಲ್ಲಿಯೇ ನಿಲ್ಲಬೇಕು.  ಧ್ಯಾನಕಾಲದಲ್ಲಿ ಬೇರೊಂದರ ಆಲೋಚನೆ ಬಂದರೆ ಧ್ಯಾನ ಭಂಗವಾಗುತ್ತದೆ.  ಚಿತ್ತ ಒಂದು ಸಾಗರವೆಂದು ಕಲ್ಪಿಸಿದರೆ ಅದರಲ್ಲೇಳುವ ತರಂಗಗಳೇ ಮಾನಸಿಕ ವೃತ್ತಿಗಳು.  ಸಮುದ್ರದಲ್ಲಿ ಏಳುವ ಸಣ್ಣ ಸಣ್ಣ ತರಂಗಗಳು ಒಂದು ದೊಡ್ಡ ತರಂಗದಿಂದ ಲಯವಾಗುವಂತೆ ನಮ್ಮ ಮನಸ್ಸಿನಲ್ಲಿ ಯಾವಾಗಲೂ ಏಳುತ್ತಿರುವ ವೃತ್ತಿಗಳೆಲ್ಲ ಧ್ಯಾನವೆಂಬ ಒಂದು ದೊಡ್ಡ ಪ್ರವಾಹದಿಂದ ನಿರೋಧಿಸಲ್ಪಡುತ್ತದೆ.
						                    (ಎಸ್.ಡಬ್ಲ್ಯೂ.ಎ)

ಧ್ಯಾನದಿಂದ ಮನುಷ್ಯ ಅನೇಕ ಪ್ರಯೋಜನಗಳನ್ನು ಪಡೆಯಬಹುದು.  ದೂರದ ಸಂಗತಿಯನ್ನು ಇದ್ದಲ್ಲೇ ಅರಿಯುವ, ಭೂತ, ವರ್ತಮಾನ ಭವಿಷ್ಯತ್ ಕಾಲ e್ಞÁನವನ್ನು ತಿಳಿಯುವ, ಇತರರ ಇಂಗಿತವನ್ನು ಅರ್ಥ ಮಾಡಿಕೊಳ್ಳುವ, ತನ್ನ ಆಲೋಚನೆಗಳನ್ನು ಇತರರ ಮನಸ್ಸಿಗೆ ನೇರವಾಗಿ ತಲುಪಿಸುವ, ಸಾಮಾನ್ಯರಲ್ಲಿ ಆಗದ ದೈತ್ಯ ಸಾಹಸವನ್ನು ತೋರಿಸುವ ಶಕ್ತಿಗಳು ಧ್ಯಾನದಿಂದ ವ್ಯಕ್ತಿಗೆ ಲಭ್ಯವಾಗುತ್ತದೆ.  ಆದರೆ ಧ್ಯಾನದ ಗುರಿ ಭೌತಿಕ ಪ್ರಯೋಜನವನ್ನು ಪಡೆಯುವುದಾಗಿರದೆ ಮೋಕ್ಷದೆಡೆಗೊಯ್ಯುವ ಆಧ್ಯಾತ್ಮಿಕ ಅನುಭೂತಿಯನ್ನು ಪಡೆಯಲು ಚಿತ್ತಶುದ್ದಿ, ಚಿತ್ತಶಾಂತಿ, ಚಿತ್ತಸ್ಥೈರ್ಯಗಳನ್ನು ಸಾಧಿಸಲು ಅಗತ್ಯವಾದ ಎಲ್ಲ ಪ್ರಯೋಜನಗಳನ್ನು ಪ್ರಾಪ್ತಿ ಮಾಡಿಕೊಳ್ಳುವುದೇ ಆಗಿದೆ.  ಆದ್ದರಿಂದ ಧ್ಯಾನದ ವಸ್ತು ಪರಮಾತ್ಮ ವಿಷಯಕÀವಾಗಿರಬೇಕು ಮತ್ತು ಪ್ರಾಪ್ತಿಯಾಗುವ ಸರ್ವಜ್ಞತ್ವ ಮೋಕ್ಷಸಾಧನಕಾರಣಗಳಲ್ಲಿ ಅಭಿವ್ಯಕ್ತವಾಗಬೇಕು.

ಧ್ಯಾನಕ್ರಿಯೆಯನ್ನು ಸುಲಭಗೊಳಿಸಲು ಪದ್ಮಾಸನ, ಸಿದ್ಧಾಸನ ಮತ್ತು ಸುಖಾಸನ ಇವನ್ನು ಅವಲಂಬಿಸಬೇಕು.  ಅಸನಜಯದೊಂದಿಗೆ ಅಂತರಂಗ ಬಹಿರಂಗ ಪ್ರವೃತ್ತಿಗಳನ್ನು ಗೆಲ್ಲಬೇಕು. ಉಸಿರಾಟದಲ್ಲಿಯೂ ವಸ್ತ್ರ ಭೂಷಣಾದಿಗಳನ್ನು ತೊಡುವುದರಲ್ಲಿಯೂ ಪರರಿಂದ ವಸ್ತುಗಳನ್ನು ಪಡೆಯುವುದರಲ್ಲಿಯೂ ಎಚ್ಚರ ಧ್ಯಾನಾವಸ್ಥೆಗೆ ಬಹುಮುಖ್ಯವಾದುದು. ಜೀವಂತ ವಿಗ್ರಹದಂತೆ ಆಸನಸ್ಥಿತನಾಗಿ ಧ್ಯಾನವಸ್ತುವನ್ನು ಭ್ರೂಮಧ್ಯದಲ್ಲಿ ಕೇಂದ್ರೀಕರಿಸುವುದರಿಂದ ಧ್ಯಾನ ಸುಲಭವೇದ್ಯವಾಗುವುದು.
ಈಚೆಗೆ ಧ್ಯಾನದ ವಿಷಯದಲ್ಲಿ ಪಾಶ್ಚಾತ್ಯರೂ ಆಸಕ್ತರಾಗುತ್ತಿದ್ದಾರೆ.  				(ಪಿ.ಎಚ್.ಇ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ